ಶಾಲೆಯಲ್ಲಿ ಜನಪದ

                                       
ಮಲ್ಕಾಪೂರ ಶಾಲೆಯಲ್ಲಿ ಜಾನಪದ ಅನುಸಂದಾನ
(ಜಾ£ಪÀದ ಸಾಹಿತ್ಯ ಹುಡುಕಿ ತಂದು ಹಾಡುವ ಹಳ್ಳಿ ಹಕ್ಕಿಗಳು)

-0-
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಲ್ಕಾರಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಎರಡು ವರ್ಷಗಳಿಂದ “ಜಾನಪದ ಅನುಸಂದಾನ” ನಡೆಸುತ್ತಿದ್ದಾರೆ. ಇದೇನಪಾ... ವಿಶ್ವವಿದ್ಯಾಲಯಗಳು, ಪಿಎಚ್‍ಡಿ ಮಾಡುವ ಹಿರಿಯ ವಿದ್ಯಾರ್ಥಿಗಳು, ಚಿಂತಕರು ಮಾಡುವಂತಹ ಈ ಅಂತರ್ಗತ ಸಾಹಿತ್ಯದ ಅನುಸಂದಾನ ಸಂಶೋಧನೆಯನ್ನು ಈ ಪ್ರಾಥಮಿಕ ಶಾಲೆಯ ಪೋರರು ಮಾಡ್ತಾರೆ ಅಂದ್ರೆ ಹೇಗೆ? ಅಂತ ಒಂದು ಕ್ಷಣ ಅವಕ್ಕಾಗಿ ನೀವು ಹೀಗೂ ಯೋಚಿಸಬಹುದು.
ಅಂದ ಹಾಗೆ ಅಲ್ಲಿರುವ ರವಿಚಂದ್ರ.ಡಿ ಎಂಬ ಶಿಕ್ಷಕರು ಜಾನಪದ ಅಧ್ಯಯನದಲ್ಲಿ ಆಸಕ್ತಿ ಹೊಂದಿದವರು. ಜೊತೆಗೆ ಇಂಡಿಯಾ ಪೌಂಡೇಷನ್ ಫಾರ್ ದಿ ಆಟ್ರ್ಸ ಸಂಸ್ಥೆಯ ನೆರವಿನಲ್ಲಿ ಶಾಲಾ ಮಕ್ಕಳಿಗಾಗಿ ಜಾನಪದ ಅನುಸಂದಾನ ಯೋಜನೆ ಹಾಕಿಕೊಂಡಿರುವುದರಿಂದ ಆ ಶಾಲೆಯ ಎಲ್ಲ ಮಕ್ಕಳಿಗೀಗ ಜಾನಪದದ ಎಲ್ಲ ಮಜಲುಗಳು ಚಿರಪರಿಚಿತವಾಗಿವೆ. ಇದರ ಜೊತೆಗೆ ಮಲ್ಕಾಪೂರ ಗ್ರಾಮ ಜಾನಪದ ಸಾಹಿತ್ಯ, ಕಲೆ ಹಾಗೂ ಕಲಾವಿದರನ್ನು ಹೊಂದಿರುವ ಗ್ರಾಮವಾಗಿರುವುದರಿಂದ ಈ ಮಕ್ಕಳ ಸರಳವಾಗಿ ಜಾನಪದದ ಅನುಸಂದಾನ ನಡೆಸಲು ಪೂರಕ ವಾತಾವರಣ ಅಲ್ಲಿ ನಿರ್ಮಾಣವಾಗಿದೆ.
ಎರಡು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮ ಶಾಲೆಯಲ್ಲಿ ನಡೆದಿರುವುದರಿಂದ ಕಲಿಕೆಯೊಂದಿಗೆನೇ ಮಕ್ಕಳೆ ಜಾನಪದ ಕಲಾವಿದರನ್ನು ಸಂದರ್ಶನ ಮಾಡುತ್ತಾರೆ, ಶಾಲೆಗೆ ಕಲಾವಿದರನ್ನು ಕರೆಸುತ್ತಾರೆ, ಪ್ರದರ್ಶನ ನೀಡುತ್ತಾರೆ, ಅಳಿದು ಹೋಗುತ್ತಿರುವ ಜಾನಪದ ಸಾಹಿತ್ಯವನ್ನು ಸಂಗ್ರಹಿಸುತ್ತಾರೆ. ಜಾನಪದ ವಾದ್ಯಗಳನ್ನು ನುಡಿಸುವ ಕಲಾವಿದರೊಂದಿಗೆ ಶಾಲೆಗೆ ಕರೆಯಿಸಿ ತಾವು ಕಲಿಯುತ್ತಾರೆ, ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಅಲೆದು ಜಾನಪದ ಪ್ರದರ್ಶನ ಮಾಡುವುದರೊಂದಿಗೆÀ ಆ ಹಳ್ಳಿಗಳಲ್ಲಿರುವ ಕಲೆ, ಸಾಹಿತ್ಯವನ್ನು ತಮ್ಮೊಂದಿಗೆ ಹೊತ್ತು ತರುತ್ತಾರೆ. ಹೀಗೆ ಸಂಗ್ರಹ ಮಾಡಿದ ಜಾನಪದ ಸಾಹಿತ್ಯಕ್ಕೆ ತಮ್ಮ ಸಾಹಿತ್ಯವನ್ನೂ ಸೇರಿಸಿ ಮೌಲ್ಯಗೊಳಿಸಿ “ಮಲ್ಕಾಪೂರ ಮಕ್ಕಳ ಜಾನಪದ ಅನುಸಂದಾನ’ ಎಂಬ ಪುಸ್ತಕ ಹೊರತಂದು ಪುಸ್ತಕ ಲೋಕಕ್ಕೆ ತಮ್ಮದೆ ಕೊಡುಗೆ ನೀಡಿ, ಜನಪದ ಸಾಹಿತಿಗಳ, ಸಂಶೋಧಕರ ಸಾಲಿನಲ್ಲಿ ಈ ಪೋರರು ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ ಎಂದರೆ ಆಶ್ವರ್ಯದ ಮಾತೇ ಸರಿ.
ಅನುಸಂದಾನ ಪರಿಕಲ್ಪನೆಯ ಆಯಾಮಗಳು:
ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಪೂರಕವಾಗಿ ಹಾಕಿಕೊಂಡಿರುವ ಶಿಕ್ಷಕರ ಸ್ವಯಂ ಯೋಜನೆಯಾಗಿರುವ ಈ ಪಠ್ಯಂತರ್ಗತ ಜಾನಪದ ಪರಿಕಲ್ಪನೆಯು ವಿವಿಧ ಆಯಾಮಗಳನ್ನು ಒಳಗೊಂಡಿದೆ. ಮೊದಲಿಗೆ ಶಾಲಾ ಮಕ್ಕಳಿಂದ ಜಾನಪದ ಕ್ಷೇತ್ರಕಾರ್ಯ, ಶಾಲಾ ಮಕ್ಕಳ ತಾಯಂದಿರು, ಊರಿನ ಜಾನಪದ ಕಲಾವಿದರಿಂದ ಜಾನಪದ ಸಂಗ್ರಹ, ನಂತರ ಬರಹರೂಪಕಕ್ಕಿಳಿಸುವುದು, ಹಾಡುವಿಕೆ, ನೃತ್ಯ ಕಲಿಯುವಿಕೆ, ಪ್ರದರ್ಶನ ನಡೆಯುತ್ತದೆ.
ಅಲ್ಲದೆ ಜಾನಪದಗಳಲಯ, ಶೈಲಿಯನ್ನು ಉಳಿಸಿಕೊಂಡು ಕನ್ನಡ, ಗಣಿತ, ಸಮಾಜ ವಿಜ್ಞಾನ, ಪರಿಸರ ಅಧ್ಯಯನದ ವಿಷಯಗಳನ್ನು ಶಾಲಾ ಪಠ್ಯಾಂಶಗಳನ್ನು ಜಾನಪದಗಳೊಂದಿಗೆ ಮರುಸೃಷ್ಟಿಸಲಾಗುತ್ತದೆ. ಬಳಿಕ ಕಲಾಂತರ್ಗತಗೊಳಿಸಿ ಸಮುದಾಯದಲ್ಲಿ ಮುಖಾಮುಖಿಯಾಗಿಸಿ ಪ್ರದರ್ಶನಕ್ಕೂ ಮಕ್ಕಳನ್ನು ಸಿದ್ಧಗೊಳಿಸುವ ವ್ಯಾಪಕ ಪ್ರಕ್ರಿಯೆ ಇಲ್ಲಿ ನಿರಂತರವಾಗಿ ನಡೆದಿದೆ. ನಾಡಿನ ಜಾನಪದ ತಜ್ಞರು, ಖ್ಯಾತ ಕಲಾವಿದರು, ಜಾನಪದ ಚಿಂತಕರು ಈ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ವಿಶೇಷವಾಗಿದೆ.
“ರಾಷ್ಟ್ರೀಯ ಪಠ್ಯಕ್ರಮ ಸಮಿತಿ 2005 ಹೇಳುವಂತೆ, ಪಠ್ಯಪುಸ್ತಕಗಳ ಹೊರತಾಗಿ ಪಠ್ಯಕ್ರಮವನ್ನು ಶ್ರೀಮಂತಗೊಳಿಸುವುದು, ಕಲಿಕೆಯನ್ನು ಜೀವನ ಅವಶ್ಯಕತೆಗಳೊಂದಿಗೆ ಜೋಡಿಸುವುದು ಹಾಗೂ ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ದಿಪಡಿಸುತ್ತ ಕಲಿಕಾಗುಣಮಟ್ಟ ಹೆಚ್ಚಿಸುವ ಉದ್ದೇಶಿತ ಗುರಿ ಇಲ್ಲಿ ಸಾಧ್ಯವಾಗಿದೆ. ನಮ್ಮ ಜಾನಪದ ಪಠ್ಯಂತರ್ಗತ ಪ್ರಯೋಗಿಕ ಕೃತಿ ನಮ್ಮೂರ ಜಾನಪದ ಅನುಸಂಧಾನ ಪುಸ್ತಕ ಜನಪದ ಲೋಕಕ್ಕೆ ಮಕ್ಕಳ ದೊಡ್ಡ ಕೊಡುಗೆಯಾಗಿದೆ’ ಎಂದು ಶಿಕ್ಷಕ ರವಿಚಂದ್ರ.ಡಿ ಹೇಳುತ್ತಾರೆ.








ಗ್ರಾಮಸ್ಥರ ಒಲವು... ಮಕ್ಕಳ ಗೆಲುವು:
ಮಕ್ಕಳು ಆಡುತ್ತಲೆ ಹಾಡು ಕಲಿತಿದ್ದು, ಸಂದರ್ಶನದ ಮೂಲಕ ಬರಹ ಕಲಿತಿದ್ದು, ಕಲಾವಿದರನ್ನು ಮಾತನಾಡಿಸುತ್ತ ಮಾತುಗಾರಿಕೆ ರೂಢಿಸಿಕೊಂಡಿದ್ದು... ಪಾಲಕರಿಗೆ ಶಾಲೆಯ ಮೇಲೆ ಒಲವು ಹೆಚ್ಚಲು ಮುಖ್ಯ ಕಾರಣವಾಗಿದೆ. ಮಕ್ಕಳಿಗೆ ವಿವಿಧ ಆಯಾಮಗಳು ಪರಿಚಿತವಾದ ಕಾರಣ ಬೌದ್ದಿಕ ವಿಕಾಸದ ಸಾಧ್ಯತೆÉಗಳ ವಿಸ್ತರಣೆಯಾಗಿ ಗ್ರಹಿಕೆಯಲ್ಲೂ ಸಾಕಷ್ಟು ಬದಲಾವಣೆ ಮೂಡಿದೆ. ಜಾನಪದಗಳಲ್ಲಿ ಕಲಾ ಶಿಕ್ಷಣ ಮತ್ತು ಸಮುದಾಯದ ಒಳಗೊಳ್ಳುವಿಕೆ ಹೆಚ್ಚಿಸಲಾಗಿದೆ. ಪಠ್ಯಂತರ್ಗತ ಜಾನಪದಗಳಲ್ಲಿ ಕಲಾಂತರ್ಗತ ಕಲಿಕೆ ಮತ್ತು ತರಗತಿ ಕೋಣೆಯಲ್ಲಿ ನಾವೀನ್ಯತೆ, ಜಾನಪದ ಗೀತೆಗಳು, ಜಾನಪದ ನುಡಿಗಟ್ಟುಗಳು, ಗಾದೆಗಳು ಒಡಪುಗಳು, ಹಬ್ಬದಾಟಗಳು, ಮಕ್ಕಳ ಜ್ಞಾನದ ಅಭಿವೃದ್ದಿಗೆ ಪೂರಕವಾಗಿ ತರಗತಿ ಕೋಣೆಯಲ್ಲಿ ನಾವೀನ್ಯತೆಯೊಂದಿಗೆ ಸರಳ ಹಾಗೂ ಸಹಜ ಕಲಿಕೆಗೆ ನೆರವಾಗಿವೆ.
ಶೈಕ್ಷಣಿಕ ಜಾಗೃತಿಗಾಗಿ ಜಾನಪದ:
ಡೊಳ್ಳಿನ ಪದದ ಮೂಲಕ ಶಾಲೆಬಿಟ್ಟ ಮಕ್ಕಳನ್ನು ಕರೆತರಲು ಮಕ್ಕಳು ಡೊಳ್ಳುಬಾರಿಸುತ್ತಲೇ ಹಾಡುತ್ತಾ ಮನೆ ಮನೆ ತೆರಳಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಾರೆ. ಮಕ್ಕಳಲ್ಲಿ ಮತ್ತು ಸಮುದಾಯದಲ್ಲಿ ವೈಜ್ಞಾನಿಕತೆ ಮತ್ತು ಜಾಗೃತಿ ಮೂಡಿಸುವಲ್ಲಿ ಪಠ್ಯಂತರ್ಗತ ಜಾನಪದಗಳ ಬಳಕೆ ಸಮರ್ಥವಾಗಿ ಇಲ್ಲಿ ಬಳಕೆಯಾಗುತ್ತಿದೆ. ವೈಜ್ಞಾನಿಕತೆ, ಸಂವಿಧಾನಿಕ ಆಶಯಗಳನ್ನು, ಪರಿಸರ ಜಾಗೃತಿ ಮುಂತಾದ ವಿಚಾರಗಳನ್ನು ಒಳಗೊಂಡಂತೆ ಜಾನಪದಗಳನ್ನು ಮಕ್ಕಳು ಸಂಗ್ರಹಿಸಿದ್ದಾರೆ.
ಜಾನಪದ ಅರಿವು ಮೂಡಿಸಲು ಜಾಗೃತಿ ಜಾನಪದಗಳು, ಜಲಪದಗಳು, ಜಾನಪದ ಗಣಿತ, ಪರಿಸರ ಜಾನಪದಗಳು ನಮ್ಮ ತರಗತಿಕೋಣೆಯಲ್ಲಿ ಹೆಚ್ಚಾಗಿ ಬಳಸಲಾಗಿದೆ. ಜಾನಪದ ಅನುಸಂದಾನ ಪರಿಸರ ಸಂರಕ್ಷಣೆ, ಭಾಷಾ ಕೌಶಲ ಮತ್ತು ಕಲಿಕೆಯ ಪುನರ್‍ಬಲನಕ್ಕೆ ಪೂರಕವಾಗಿದೆ. ಗ್ರಾಮೀಣ ಭಾಷಾ ಸೊಗಡನ್ನು, ಸಾಹಿತ್ಯ, ಲಯ, ಹಾಡುಗಾರಿಕೆ ಅರಿತುಕೊಂಡಿದ್ದಾರೆ. ಸೃಷ್ಟಿಶೀಲ ಜಾನಪದಗಳ ಪುನರುಜ್ಜೀವನ ಕಾರ್ಯಕ್ಕೆ ಮಾದರಿಯಾಗಿದೆ.
ಪಠ್ಯಂತರ್ಗತ ಮನೋವೈಜ್ಞಾನಿಕ ಫಲಿತಗಳು:
ಮುಖ್ಯವಾಗಿ ಮಕ್ಕಳಲ್ಲಿ, ಶಿಕ್ಷಕರಲ್ಲಿ, ಸಮುದಾಯದಲ್ಲಿ ಕಲೋತ್ಸಾಹದ ಜೊತೆಗೆ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿವೆ. ಜಾನಪದಗಳಲ್ಲಿ ಪರಂಪರೆಯ ಜ್ಞಾನದೊಂದಿಗೆ ಜೀವನ ಶಿಕ್ಷಣ, ನೈತಿಕ ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಕಲಿಕಾ ಸೇತುವೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ವರ್ತನೆಯಲ್ಲಿ ಬದಲಾವಣೆ, ನಾಯಕತ್ವ ಗುಣ ಬೆಳವಣಿಗೆ, ಕಲಾಭಿವ್ಯಕ್ತಿ, ಕಲೋಪಾಸನೆ ಮೂಲಕ ಖಿನ್ನತೆ ದೂರಮಾಡುವಲ್ಲಿಯೂ ಜಾನಪದಗಳು ಪರಿಣಾಮಕಾರಿಯಾಗಿವೆ. ಈ ಕಾರ್ಯಕ್ರಮದಿಂದಾಗಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಸುಧಾರಣೆಯಾಗಿದೆ, ಶಾಲೆ ಸಮುದಾಯಕ್ಕೆ ಹತ್ತ್ತಿರವಾಗಿದೆ, ಮಕ್ಕಳ ಗುಣಮಟ್ಟದ ಕಲಿಕೆಗೆ ಪೂರಕವಾಗಿದೆ, ಮಕ್ಕಳಲ್ಲಿ, ಪಾಲಕರಲ್ಲಿ ಉತ್ಸಾಹ ಹೆಚ್ಚಿದೆ, ಮಕ್ಕಳ ಅಭಿವ್ಯಕ್ತಿ ಪ್ರದರ್ಶನಕ್ಕೆ ಅವಕಾಶ ದೊರಕಿದೆ, ಮಕ್ಕಳಲ್ಲಿ ಓದುವ ಹವ್ಯಾಸ, ಓದಿದ್ದನ್ನು ಪರಾಮರ್ಶಿಸುವ ಹವ್ಯಾಸ ಬೆಳೆದಿದೆ ಎಂದು ರವಿಚಂದ್ರ.ಡಿ ಸಂತಸದಿಂದ ಹೇಳುತ್ತಾರೆ.
 “ಈ ಯೋಜನೆಯಲ್ಲಿ ಶಿಕ್ಷಕರು ಪಠ್ಯಕ್ರಮದಿಂದ ಬಹಳ ದೂರ ಇರಬೇಕಾಗಿಲ್ಲ ಪಠ್ಯವನ್ನು ಅರ್ಥೈಸಿಕೊಳ್ಳುವ ದೃಷ್ಟಿಕೋನ ಮಾತ್ರ ಬದಲಾಗಬೇಕು. ದೃಶ್ಯ ಮಾಧ್ಯಮ, ನೃತ್ಯ, ರಂಗಭೂಮಿ, ಸಂಗೀತ, ಗೊಂಬೆಯಾಟದ ಮೂಲಕ ಶಾಲೆಗಳಲ್ಲಿ ಪಾಠ ನಡೆಯುತ್ತದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಸೃಜನಶೀಲ ಕಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದಾಗಿದೆ’ ಎಂದು ಕಲಿಕಲಿಸು ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಕೃಷ್ಣಮೂರ್ತಿ ಟಿ.ಎನ್ ಹೇಳುತ್ತಾರೆ.
-0-
ಚಿತ್ರ ಮಾಹಿತಿ:
ಅನುಸಂದಾನ1: ಜಾನಪದ ಅನುಸಂದಾನ ಪ್ರದರ್ಶನದಲ್ಲಿ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಲ್ಕಾಪೂ ಶಾಲೆಯ ಮಕ್ಕಳು
ಅನುಸಂದಾನ2: ಹಳ್ಳಿಗರಿಂದ ಜಾನಪದ ಕಲಿಯುತ್ತಿರುವ ಮಕ್ಕಳು
ಅನುಸಂದಾನ3: ಹೀಗಿದೆ ನೋಡಿ ಜಾನಪದ ಅಧ್ಯಯನ
ಅನುಸಂದಾನ4: ಇದು ಪಕ್ಕಾ ಗ್ರಾಮೀಣ ಭಾಗದ ಜಾನಪದ ಶೈಲಿಯ ಅನಾವರಣ
ಅನುಸಂದಾನ5: ಜಾನಪದ ಸಂಗ್ರಹ ಮಾಡಿದ್ದೇವೆ ನೋಡ ಬನ್ನಿ
ಅನುಸಂದಾನ6: ಮಕ್ಕಳ ಜಾನಪದ ಹಾಡುಗಳನ್ನು ಕಲಿಕಾ ಪರೀಕ್ಷೆ ನಡೆಸಿರುವ ಅಜ್ಜಿ
ಅನುಸಂದಾನ7: ಇದೆ ಮಕ್ಕಳು ಸಂಗ್ರಹಿಸಿದ ಜಾನಪದ ಅನುಸಂದಾನ ಪುಸ್ತಕ
ಅನುಸಂದಾನ8: ಮಾರ್ಗದರ್ಶಿ ಶಿಕ್ಷಕ ರವಿರಾಜ ಸಾಗರ
ಅನುಸಂದಾನ9: ಡೊಳ್ಳು ಬಾರಿಸುವುದಕ್ಕೂ ನಾವು ರೆಡಿ


 ಕಿಶನರಾವ್ ಕುಲಕರ್ಣಿ
ಸರ್ಕಾರಿ ಪದವಿ ಪೂರ್ವ ಕಾಲೇಜ್, ಪ್ರೌಢ ಶಾಲಾ ವಿಭಾಗ
ಹನುಮಸಾಗರ – 583281

Comments

Post a Comment

Popular posts from this blog

Children's pencil paper